Year | : | 1967 |
Publisher | : | Sahitya Bhandara, Bengaluru |
Reprints | : | 12 |
ಸೃಷ್ಟಿಶಕ್ತಿಯಿಂದ ವಿಜೃಂಭಿಸುವ ಜೀವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನಪರಿಸ್ಥಿತಿಯ ತಾಕಲಾಟವೇ ‘ಜಲಪಾತ’ದ ಕಥಾವಸ್ತು. ನೀರು ಮತ್ತು ಮಣ್ಣಿನ ಶಕ್ತಿಯಿಂದ ಕಂಗೊಳಿಸುವ ವನಶ್ರೀ, ಗಂಡು ಹೆಣ್ಣುಗಳ ಮೂಲಶಕ್ತಿಯಾದ ಜೀವನವಿಕಾಸ, ಮತ್ತು ಬೌದ್ಧಿಕಸ್ತರದಲ್ಲಿ ಆವಿರ್ಭವಿಸುವ ಕಲಾಸೌಂದರ್ಯ-ಇವು ಮೂರು, ವಿವಿಧಸ್ತರಗಳಲ್ಲಿ ಪ್ರಕಟವಾಗುವ ಒಂದೇ ಮೂಲಶಕ್ತಿ ಎಂಬುದನ್ನು ಕಾದಂಬರಿಯ ಅಂಗಗಳಾಗಿ ಬೆಳೆದಿರುವ ಪ್ರತೀಕಗಳು ಎತ್ತಿತೋರಿಸುತ್ತವೆ. ಸಂಯೋಗದ ಕರೆ ಮತ್ತು ಕ್ರಿಯೆ, ಗರ್ಭದ ವಿಕಾಸ, ಜನನಕ್ಕೆ ಪೂರ್ವಭಾವಿಯಾದ ನೋವಿನ ಅನುಭವ, ಮೊದಲಾದ ಸೃಷ್ಟಿಯ ಹಲವು ಹಂತಗಳನ್ನು ಅನುಭವದ ಹೊಚ್ಚ ಹೊಸತನದಿಂದ ಭಾಷೆಯಲ್ಲಿ ಹಿಡಿದಿಡಲು ಅನುಕೂಲವಾಗುವಂತೆ ಕಾದಂಬರಿಯ ಕತೆಯು, ಅದರ ಮೂಲ ಪಾತ್ರಗಳಾದ ಒಂದು ಗಂಡು ಮತ್ತು ಅದರ ಹೆಣ್ಣಿನ ಸ್ವಂತ ಅನುಭವದ ವರ್ಣನೆಯ ರೀತಿಯಲ್ಲಿ ಸಾಗುತ್ತದೆ.