Year | : | 2010 |
Publisher | : | Sahitya Bhandara, Bengaluru |
Reprints | : | 31 |
ಕಾನಿಸ್ಟೇಬಲ್ ನಂಜುಂಡೇ ಗೌಡ ಮುಗುಳ್ನಕ್ಕ. ಹಳ್ಳಿಯ ಅಭ್ಯಾಸದ ಅವನ ನಗೆಯಲ್ಲಿ ಮುಗುಳು ಮತ್ತು ಗಟ್ಟಿ ನಗೆಗಳ ವ್ಯತ್ಯಾಸ ಹೆಚ್ಚು ಗೊತ್ತಾಗಲಿಲ್ಲ. ‘ಯಾಕೆ ನಗ್ತೀರ ?’ ಕಂಬಿಗಳ ಒಳಗಿದ್ದ, ಬಿ.ಇ. ಓದಿ ಉದ್ಯಮಪತಿಯಾದ ಇವನು ಕೇಳಿದ.
‘ಓದಿದ ಗಂಡಸರೆಲ್ಲ ಎಂಗಸರಾಯ್ತಾರೆ. ಓದಿದ ಎಂಗಸರೆಲ್ಲ ಗಂಡಸರಾಯ್ತಾರೆ.’ ಎಂದು ಅವನು ಈಗ ಗಟ್ಟಿಯಾಗಿ ನಕ್ಕ.
* * *
‘ಯು ಆರ್ ಮೈ ಕಸಿನ್,’ ಬೆಂಗಳೂರಿನ ಅವಳು ಹಳ್ಳಿ ಮನೆಯ ಹಿತ್ತಲಿನ ಪರಂಗಿ ಗಿಡದ ಹತ್ತಿರ ಅವನನ್ನು ಮಾತನಾಡಿಸಿದಳು.
‘ನಿನಗೆ ಯಾರು ಇಂಗ್ಲಿಷ್ ಹೇಳಿಕೊಟ್ಟೋರು?’ ಅವನು ಒರಟಾಗಿ ಕೇಳಿದ, ಅವಳ ಸ್ಕೂಲಿನ ಯಾವ ಮಿಸ್ಸಿಗೂ ಇಲ್ಲದ ಒರಟಿನಿಂದ. ಇವನೇನು ನನಗೆ ಟೀಚರಾ ಎಂದು ಅವಳಿಗೆ ರೇಗಿತು.
‘ನನ್ನ ಮಿಸ್ಸು.ನನ್ನ ಮಮ್ಮಿ. ನನ್ನ ಮಮ್ಮಿ ಇಂಗ್ಲಿಷ್ ರೀಡರ್.’
‘ಸರಿಯಾಗಿ ತಿಳಕ. ನಾನು ನಿನಗೆ ಕಸಿನ್ ಅಲ್ಲ. ಬ್ರದರ್. ಅಂದರೆ ಅಣ್ಣ . ನೀನು ನನಗೆ ಸಿಸ್ಟರ್. ಅಂದರೆ ತಂಗಿ,’ ಎಂದ.
‘ಆದರೆ ನನ್ನ ಡ್ಯಾಡಿ ಮಮ್ಮಿ ಬೇರೆ. ನಿನ್ನ ಅಪ್ಪ ಅಮ್ಮ ಬೇರೆ,’ ಅವಳ ಅನುಮಾನ ಬಗೆಹರಿಯಲಿಲ್ಲ.
‘ಬೇರೆ ಆದರೇನು? ನಿನ್ನಪ್ಪ ನಮ್ಮಪ್ಪನಿಗೆ ಅಣ್ಣ. ನೀನು ನನಗಿಂತ ಚಿಕ್ಕೋಳು. ಆದ್ದರಿಂದ ನಾನು ನಿನಗೆ ಅಣ್ಣ. ನಿನಗೆ ಇಂಗ್ಲಿಷ್ ಹೇಳಿಕೊಟ್ಟೋರಿಗೆ ಬುದ್ದಿ ಇಲ್ಲ,’ ಅವನು ಮೇಷ್ಟರಗಿರಿ ಮಾಡಿದ.
***
ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು.
***